ಬೆಂಗಳೂರು : ಇದೇ 25 ವರ್ಷಗಳ ಹಿಂದೆ ಆರ್‌ಎಸ್‌ಎಸ್ ಬಿಜೆಪಿ ವಿರುದ್ಧ ತೊಡೆತಟ್ಟಿದ್ದ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೆಗೌಡರು ಈಗ ಅದೇ ಸಂಘಟನೆ ಜೊತೆ ಕೈಜೋಡಿಸಿದ್ದಾರೆ, ಆಗಿದ್ದ ದೇವೆಗೌಡರು ಕಾಣೆಯಾಗಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಅಣಕಿಸಿದೆ.
'ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್, ಬಜರಂಗದಳದಂತಹ ವಿಧ್ವಂಸಕ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದು ದೇವೇಗೌಡರಿಗೆ ನೆನಪಿದೆಯೇ? ಈಗ ಅದೇ ವಿಚ್ಛಿದ್ರಕಾರಿ ಸಂಘಟನೆಗಳೊಂದಿಗೆ ಕೈಜೋಡಿಸಿದ್ದು ದೇವೇಗೌಡರ ದುರಂತವೋ, ಅವರನ್ನು ಸೆಕ್ಯುಲರ್ ಎಂದು ನಂಬಿದ್ದವರ ದುರಂತವೋ ತಿಳಿಯದು!' ಎಂದು ಕಾಂಗ್ರೆಸ್ ಬರೆದುಕೊಂಡಿದೆ. 1999ರ ಮಾಧ್ಯಮದ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ , ದಕ್ಷಿಣ ಗುಜರಾತ್‌ನಲ್ಲಿ ಕ್ರೈಸ್ತರ ಮೇಲೆ ನಡೆದ ದಾಳಿಗೆ ಆರ್‌ಎಸ್‌ಎಸ್, ವಿಹೆಚ್‌ಪಿ, ಬಜರಂಗದಳ, ಶಿವಸೇನೆಯಂತಹ ಕೋಮು ಸಂಘಟನೆಗಳೇ ಕಾರಣ , ಇವುಗಳನ್ನು ನಿಷೇಧಿಸಬೇಕು ಎಂದು ಆಗ ಆರೋಪ ಮಾಡಿದ್ದರು ಎಂಬ ವಿಚಾರವನ್ನು ಕಾಂಗ್ರೆಸ್ ಮತ್ತೆ ನೆನಪಿಸಿದೆ.